CATEGORIES

NEWSLETTER


 

ಯೋಗದರ್ಶನ

ಪರಿಚಯ
          ಭಾರತೀಯ ತತ್ವಶಾಸ್ತ್ರ ಪದ್ಧತಿಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯ ತತ್ವ ಸಿದ್ಧಾಂತಗಳಂತೆ, ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಭಿಸದೆ ಭಾರತೀಯ ತತ್ವಶಾಸ್ತ್ರವು ಸತ್ಯದ ‘ದರ್ಶನ’ ಅಥವಾ ‘ನೋಟ’ ಅಥವಾ ‘ಅನುಭವ’ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದ ‘ದರ್ಶನ’ ಪದವು ಹೆಚ್ಚು ಸೂಕ್ತವೆನಿಸುತ್ತದೆ. ಈ ದರ್ಶನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ – ಆಸ್ತಿಕ ಮತ್ತು ನಾಸ್ತಿಕ. ಯಾವುವು ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿವೆಯೋ ಅವು ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ ದರ್ಶನಗಳ ವರ್ಗಕ್ಕೆ ಸೇರುತ್ತವೆ.
          ಆರು ಸಾಂಪ್ರದಾಯಿಕ ಪದ್ಧತಿಗಳೆಂದರೆ: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ. ಸಾಮಾನ್ಯವಾಗಿ ಈ ಪದ್ಧತಿಗಳು ನಾಲ್ಕು ವಿಷಯಗಳ ಬಗ್ಗೆ ಚರ್ಚಿಸುತ್ತವೆ, ಅವೆಂದರೆ – ಬ್ರಹ್ಮನ್/ಈಶ್ವರ ಅಥವಾ ಭಗವಂತನ ಇರುವಿಕೆ ಮತ್ತು ಅವನ ಸ್ವಭಾವ; ಜೀವಿಗಳು ಅಥವಾ ಪ್ರತ್ಯೇಕ ಆತ್ಮಗಳ ಸ್ವಭಾವ;  ಜಗತ್ತಿನ ಅಥವಾ ಪ್ರಪಂಚದ ಸೃಷ್ಟಿ ; ಮೋಕ್ಷ ಅಥವಾ ಮುಕ್ತಿ ಹಾಗೂ ಅದನ್ನು ಪಡೆಯಲು ಅನುಸರಿಸುವ ವಿವಿಧ ಮಾರ್ಗಗಳು/ನಿಯಮಗಳು.
ಸಾಂಖ್ಯ ಮತ್ತು ಯೋಗ ದರ್ಶನಗಳು:
          ಸಾಂಖ್ಯ ಶಬ್ದವು ‘ಸಂಖ್ಯಾ’ ಎಂದರೆ ಜ್ಞಾನ ಅಥವಾ ಅರಿವು ಎನ್ನುವ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಏಕೆಂದರೆ, ಸಾಂಖ್ಯ ಪದ್ಧತಿಯ ದಾರ್ಶನಿಕರಾದ ಕಪಿಲ ಮುನಿಗಳು “ಜ್ಞಾನವೊಂದೇ ಮೋಕ್ಷ ಅಥವಾ ಕೈವಲ್ಯ ಪಡೆಯಲು ಏಕೈಕ ಅಥವಾ ಮೂಲ ಸಾಧನ” ಎಂದು ಪ್ರತಿಪಾದಿಸಿದ್ದರಿಂದ ಈ ಪದ್ಧತಿಯನ್ನು ‘ಸಾಂಖ್ಯ ದರ್ಶನ’ವೆಂದು ಪ್ರಚುರಪಡಿಸಲಾಗಿದೆ. ಸಾಂಖ್ಯ ಎನ್ನುವುದು ಸಂಖ್ಯೆಯೆನ್ನುವ ಅರ್ಥವನ್ನೂ ಕೊಡುತ್ತದೆ. ಈ ದರ್ಶನವು ಮೂಲ ವಿಶ್ವದ ತತ್ವಗಳು ೨೪+೧ (೨೪= ಪ್ರಕೃತಿ ಮತ್ತದರಿಂದ  ಹೊಮ್ಮಿದ ವಿಶ್ವದ ತತ್ವಗಳು ಮತ್ತು ೧=ಪುರುಷ) ಎನ್ನುವ ಸಂಖ್ಯೆಯನ್ನು ನಿರ್ಧಿಷ್ಠ ಪಡಿಸುವುದರಿಂದ, ಈ ದರ್ಶನವು ತನ್ನಷ್ಟಕ್ಕೇ ಸಾಂಖ್ಯ ಪದ್ಧತಿಯೆನ್ನುವ ಅನ್ವರ್ಥ ನಾಮವನ್ನು ಪಡೆದಿರಬಹುದು.
          ಸಾಂಖ್ಯ ಪದ್ಧತಿಯು ‘ಪುರುಷ'(ಪ್ರತ್ಯೇಕ ಆತ್ಮ) ಮತ್ತು ‘ಪ್ರಧಾನ’ ಅಥವಾ ‘ಪ್ರಕೃತಿ’ ಇವುಗಳನ್ನು ಮಾತ್ರವೇ ಮೂಲ ವಾಸ್ತವತೆಗಳೆಂದು ನಂಬುವುದರಿಂದ ಅವು ‘ಈಶ್ವರ’ ಅಥವಾ ‘ಭಗವಂತ’ನನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಇದನ್ನು ಕೆಲವೊಮ್ಮೆ ‘ನಿರೀಶ್ವರ ಸಾಂಖ್ಯ’ (ಈಶ್ವರ ರಹಿತ ಸಾಂಖ್ಯ)ವೆಂದು ಕರೆದಿದ್ದಾರೆ. ಯೋಗ ದರ್ಶನವು ಸಾಂಖ್ಯದ ಎಲ್ಲಾ ತತ್ವಗಳೊಂದಿಗೆ ಈಶ್ವರ ಅಥವಾ ಭಗವಂತನನ್ನೂ ಒಪ್ಪಿಕೊಳ್ಳುವುದರಿಂದ ಅದು ‘ಸೇಶ್ವರ-ಸಾಂಖ್ಯ’ (ಈಶ್ವರ ಸಹಿತ ಸಾಂಖ್ಯ)ವೆಂದು ಪ್ರಾಚುರ್ಯ ಪಡೆದಿದೆ.
          ಸಾಂಖ್ಯ ಪದ್ಧತಿಯಲ್ಲಿ ತತ್ವಜ್ಞಾನ ಅಥವಾ ಸತ್ಯದ ಗುಣ ಮತ್ತು ಸ್ವಭಾವಗಳ ಬಗೆಗಿನ ಅನ್ವೇಷಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಆದರೆ ಯೋಗ ಪದ್ಧತಿಯು ‘ಸಾಧನೆ’ ಅಥವಾ ‘ಆಧ್ಯಾತ್ಮಿಕ ನಿಯಮ’ಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಆದ್ದರಿಂದ ಪತಂಜಲಿಯ ‘ಯೋಗಸೂತ್ರಾ’ ಅಥವಾ ಯೋಗ ಪದ್ಧತಿಯ ಮೂಲ ಗ್ರಂಥವು, ‘ಜಿಜ್ಞಾಸಾ’ ಅಥವಾ ‘ಮೀಮಾಂಸಾ’ ಎನ್ನುವ ಅನ್ವೇಷಣಾತ್ಮಕ ಪದವನ್ನು ಬಳಸದೆ; “ಅಥ ಯೋಗಾನುಶಾಸನಮ್” (ಈಗ ಯೋಗದ ಅನುಶಾಸನವು=ನಿಯಮಗಳ ಪಾಠವು, ಪ್ರಾರಂಭವಾಗಿದೆ) ಎಂದಿದೆ.
ಯೋಗ ಎಂದರೆ ಏನು? 
          ಯೋಗ ಎನ್ನುವುದನ್ನು ಎರಡು ಶಬ್ದ ಧಾತುಗಳಿಂದ ನಿಷ್ಪತ್ತಿಗೊಳಿಸಬಹುದು. ‘ಯುಜ್’ (ಒಂದುಗೂಡಿಸು/ಜೋಡಿಸು) ಅಥವಾ ‘ಯುಜ್’ (ಧ್ಯಾನಿಸು). ಆದ್ದರಿಂದ ಯಾವುದು ಜೀವಿ ಅಥವಾ ಆತ್ಮನನ್ನು ಈಶ್ವರನ ಮೇಲೆ ಧ್ಯಾನಿಸಲು ಸಹಾಯ ಮಾಡಿ ಅವನಲ್ಲಿ ಒಂದುಗೂಡಿಸುತ್ತದೆಯೋ ಅದನ್ನೇ ‘ಯೋಗ’ವೆನ್ನುವುದು.
          ಯೋಗವೆನ್ನುವ ಶಬ್ದವನ್ನು ಹಲವಾರು ಅರ್ಥಗಳಲ್ಲಿ ಋಗ್ವೇದ (೫.೮೧.೧), ಕೆಲವೊಂದು ಉಪನಿಷತ್ತುಗಳು – ಕಥಾ (೬.೧೦,೧೧; ೨.೧೨) ಮತ್ತು ಶ್ವೇತಾಶ್ವತರ (೧.೩).; ಇವುಗಳಲ್ಲಿ ಬಳಸಿರುವುದನ್ನು ಕಾಣಬಹುದು. ಭಗವದ್ಗೀತೆ(೬.೧೧,೧೩,೨೦ ಮತ್ತು ೩೫)ಯಲ್ಲಿ ಕಂಡುಬರುವ ಅನೇಕ ವಿಷಯಗಳು ಯೋಗಸೂತ್ರಾ(೨.೪೬;೧.೨;೧.೧೨)ದಲ್ಲಿ ಪ್ರಸ್ತಾವಿಸಲ್ಪಟ್ಟಿರುವ ಹಲವಾರು ಉಪದೇಶಗಳಿಂದ ಪ್ರಭಾವಿತವಾಗಿರುವಂತೆ ಕಾಣುತ್ತವೆ. ಆದ್ದರಿಂದ ಯೋಗದ ಬಗ್ಗೆ ಹಿರಣ್ಯಗರ್ಭನು ರಚಿಸಿದನೆಂದು ಹೇಳಲ್ಪಡುವ ಪುರಾತನವಾದ ಕೃತಿಯಿರಬೇಕು; ಮತ್ತು ಆ ಮೂಲ ಕೃತಿಯು ಇತರ ಕೃತಿಗಳ ರಚನೆಯ ಮೇಲೆ ತನ್ನ ಪ್ರಭಾವವನ್ನು ಬೀರಿರಬಹುದು.
ಕೃತಿಕಾರ ಮತ್ತು ಅವನ ಕಾಲ
          ಸ್ವಯಂ ಭಗವಂತನ ಸ್ವರೂಪನಾದ ಹಿರಣ್ಯಗರ್ಭನಿಂದ ಯೋಗ ವಿಜ್ಞಾನವು ಆವಿರ್ಭವಿಸಿತೆಂದು ಹಿಂದೂ ಸಂಪ್ರದಾಯವು ಆರೋಪಿಸುತ್ತದೆ. ಕೆಲವೊಮ್ಮೆ  ಋಷಿಗಳಾದ ಸನತ್ಕುಮಾರ ಮತ್ತು ಜೈಗಿಶ್ವ್ಯ ಇವರೀರ್ವರಿಂದ ಯೋಗಶಾಸ್ತ್ರವು ರಚಿಸಲ್ಪಟ್ಟಿತು ಎಂದು ತಿಳಿಸುತ್ತದೆ. ಆದರೆ ಇವರಿಂದ ರಚಿತವಾಗಿರಬಹುದಾದ  ಕೃತಿಗಳು ಇದುವರೆಗೆ ಲಭ್ಯವಾಗಿಲ್ಲ.
          ನಮಗೆ ಈಗ ದೊರೆತಿರುವ ಕೃತಿಗಳಲ್ಲಿ ಪತಂಜಲಿಯ ಯೋಗಸೂತ್ರವೇ ಬಹು ಪುರಾತನವಾದದ್ದೆಂದು ತೋರುತ್ತದೆ. ಪಾಣಿನಿಯ ಸೂತ್ರಗಳಿಗೆ ಭಾಷ್ಯ ಅಥವಾ ವ್ಯಾಖ್ಯಾನವನ್ನು ಬರೆದ ಪತಂಜಲಿ ಹಾಗೂ ಯೋಗಸೂತ್ರವನ್ನು ರಚಿಸಿದ ಪತಂಜಲಿಯು ಒಬ್ಬರೇ ಎನ್ನುವುದು ಇದುವರೆಗೂ ನಿರ್ವಿವಾದಿತವಾಗಿ ನಿರೂಪಿತವಾಗಿಲ್ಲ. ಆಯುರ್ವೇದದ ಬಗ್ಗೆಯೂ ಪತಂಜಲಿಯು ರಚಿಸಿರುವನೆಂದು ಹೇಳಲಾದ ಕೃತಿಯೂ ಕೂಡ ಇದುವರೆಗೆ ನಮಗೆ ಲಭ್ಯವಾಗಿಲ್ಲ. ಈ ಪತಂಜಲಿಯು ಸುಮಾರು ಕ್ರಿ.ಪೂ. ೨೦೦ರಿಂದ ಕ್ರಿ.ಶ. ೩೦೦ರ ಮಧ್ಯ ಕಾಲದಲ್ಲಿ ಜೀವಿಸಿರಬಹುದೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ.
ಪತಂಜಲಿಯ ಕೃತಿ
          ಷಡ್ದರ್ಶನಗಳನ್ನು ವಿಶದಪಡಿಸುವ ಇತರೇ ಕೃತಿಗಳಂತೆ ಪತಂಜಲಿಯ ಗ್ರಂಥವೂ ಕೂಡ ಸೂತ್ರರೂಪದಲ್ಲಿದೆ. ಸೂತ್ರವೆಂದರೆ ಚಿಕ್ಕದಾದ ನೆನಪಿನಲ್ಲಿಡಬೇಕಾದ ನುಡಿಗಟ್ಟು/ವಾಕ್ಯ; ಸೂತ್ರವು ಮಿತ ಅಕ್ಷರಗಳನ್ನು ಹೊಂದಿದ್ದು ಮಹತ್ತರವಾದ ಜ್ಞಾನವನ್ನು ಹೊರಹೊಮ್ಮಿಸುತ್ತದೆ.
          ಯೋಗಸೂತ್ರವು ೧೯೫ ಸೂತ್ರಗಳನ್ನೊಳಗೊಂಡ ನಾಲ್ಕು ಪಾದಗಳು ಅಥವಾ ಅಧ್ಯಾಯಗಳನ್ನು ಹೊಂದಿದೆ. ಅವೆಂದರೆ: ಸಮಾಧಿ ಪಾದ (೫೧ ಸೂತ್ರಗಳು); ಸಾಧನಪಾದ (೫೫ ಸೂತ್ರಗಳು); ವಿಭೂತಿಪಾದ (೫೫ ಸೂತ್ರಗಳು) ಮತ್ತು ಕೈವಲ್ಯಪಾದ (೩೪ಸೂತ್ರಗಳು).
          ಯಾವುದೇ ಸೂತ್ರ ಕೃತಿಯು ತನ್ನ ಶೈಲಿಯಿಂದಾಗಿ ಅಸ್ಪಷ್ಟವಲ್ಲದಿದ್ದರೂ ದ್ವಂದ್ವತೆಯಿಂದ ಕೂಡಿರುತ್ತದೆ; ಹಾಗಾಗಿ ಅದನ್ನು ಅರ್ಥ ಮಾಡಿಸಲು ಅದಕ್ಕೆ ವ್ಯಾಖ್ಯಾನ ಅಥವಾ ಭಾಷ್ಯ ಬಹು ಆವಶ್ಯಕ. ಸುದೈವವಶಾತ್ ಯೋಗಸೂತ್ರಗಳು ಹಲವಾರು ಪ್ರಭುದ್ಧರ ಗಮನ ಸೆಳೆದದ್ದರಿಂದ ಅವರು ವಿದ್ವತ್ಪೂರ್ಣ ಟಿಪ್ಪಣಿ ಹಾಗೂ ಉಪಟಿಪ್ಪಣಿ(ಭಾಷ್ಯ, ಟೀಕಾ, ವಾರ್ತಿಕ ಮೊದಲಾದವುಗಳು)ಗಳನ್ನು ರಚಿಸಿ ಯೋಗ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
          ವ್ಯಾಸ ರಚಿತ ‘ಭಾಷ್ಯ’ವು ಯೋಗಸೂತ್ರಕ್ಕೆ ಬರೆದ ಮೂಲ ಟಿಪ್ಪಣಿಯೆಂದು ಒಪ್ಪಿಕೊಳ್ಳುವುದಲ್ಲದೆ ಅದನ್ನು ಗೌರವಾದರಗಳಿಂದ ವ್ಯಾಸರ ನಂತರದ ಎಲ್ಲಾ ಕೃತಿಕಾರರು ಕಂಡಿದ್ದಾರೆ. ಈ ವ್ಯಾಸನು ಬಹುಶಃ ನಮ್ಮ ಸಾಂಪ್ರದಾಯಿಕ ವ್ಯಾಸನಿಗಿಂತ ಬೇರೆಯವನು ಎಂದು ತಿಳಿಯಲಾಗಿದೆ ಮತ್ತು ಈತನ ಜೀವಿತ ಕಾಲವು ಕ್ರಿ.ಶ. ೪೦೦ ಎಂದು ಭಾವಿಸಲಾಗಿದೆ.
          ಈ ಕೆಳಗಿನವು ವ್ಯಾಸ ಭಾಷ್ಯಕ್ಕೆ ಬರೆದಿರುವ ಟೀಕೆ ಹಾಗೂ ಟಿಪ್ಪಣಿಗಳು:
ವಾಚಸ್ಪತಿ ಮಿಶ್ರ(ಕ್ರಿ.ಶ. ೮೫೦) ಬರೆದ – ‘ತತ್ವವೈಶಾರದಿ’; ವಿಜ್ಞಾನಭಿಕ್ಷು(ಕ್ರಿ.ಶ. ೧೬ನೇ ಶತಮಾನ)ವಿನ – ‘ಯೋಗವಾರ್ತಿಕ’; ಹರಿಹರಾನಂದ ಅರಣ್ಯ (೧೯ನೇ ಶತಮಾನ) ವಿರಚಿತ ‘ಭಾಸ್ವತೀ’.  ಶಂಕರ(ಕ್ರಿ.ಶ. ೭೮೮-೮೨೦)ರು ರಚಿಸಿದರೆಂದು ಹೇಳಲಾದ ಯೋಗಭಾಷ್ಯವಿವರಣ ಎನ್ನುವ ಕೃತಿಯೂ ಲಭ್ಯವಿದೆ. ಆದರೆ ಈ ಕೃತಿಯು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಆದಿಶಂಕರರಿಂದ ರಚಿಸಲ್ಪಟ್ಟಿತೋ ಇಲ್ಲವೋ ಎನ್ನುವ ವಿಷಯದಲ್ಲಿ ವಿದ್ವಾಂಸರಲ್ಲಿ ಗೊಂದಲವಿದೆ. ಬರವಣಿಗೆಯ ಶೈಲಿ ಮತ್ತು ಕೃತಿಯ ನಿರೂಪಣೆ, ಮತ್ತು ಆದಿ ಶಂಕರರು ಮಹಾನ್ ಯೋಗಿಗಳಾಗಿದ್ದರು ಎನ್ನುವುದು ದೃಢಪಟ್ಟ ವಿಷಯವಾದ್ದರಿಂದ, ಈ ಕೃತಿಯು ಅವರದೇ ಆಗಿರಬಹುದು ಎನ್ನುವುದಕ್ಕೆ ಸ್ವಲ್ಪ  ಪುಷ್ಟಿ ದೊರೆಯುತ್ತದೆ.
          ಇವಲ್ಲದೆ ಯೋಗಸೂತ್ರಕ್ಕೆ ನೇರವಾಗಿ ಬರೆದ ಕನಿಷ್ಠ ಆರು ಭಾಷ್ಯಗಳು ಲಭ್ಯವಿವೆ. ಅವೆಂದರೆ: ಭೋಜದೇವ(೧೧ನೇ ಶತಮಾನ) ಬರೆದ ‘ರಾಜಮಾರ್ತಾಂಡಾವೃತ್ತಿ’; ಭಾವಗಣೇಶನು ರಚಿಸಿದ ‘ಯೋಗಸೂತ್ರಪದೀಪಿಕಾ’; ನಾಗೋಜಿ ಭಟ್ಟನ ‘ಯೋಗಸೂತ್ರಾವೃತ್ತಿ’; ರಾಮಾನಂದ ಯತಿಗಳ ‘ಯೋಗಮಣಿಪ್ರಭಾ’, ನಾರಾಯಣ ತೀರ್ಥ ವಿರಚಿತ ‘ಯೋಗಸಿದ್ಧಾಂತಚಂದ್ರಿಕಾ’; ಮತ್ತು ಸದಾಶಿವ ಬ್ರಹ್ಮೇಂದ್ರ (೧೮ನೇ ಶತಮಾನ) ವಿರಚಿತ, ‘ಯೋಗಸುಧಾಕರ’.
ಯೋಗಸೂತ್ರಗಳ ಸಿದ್ಧಾಂತ
          ಪತಂಜಲಿ ವಿರಚಿತ ಯೋಗಸೂತ್ರವು ಮೂಲವಾಗಿ ಅಧ್ಯಾತ್ಮಿಕ ಸಾಧನೆ ಮತ್ತು ನಿಯಮಗಳ ಬಗ್ಗೆ ಪ್ರತಿಪಾದಿಸಿದರೂ ಕೂಡ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದರ ‘ಸಾಂಖ್ಯ’ದ ಹಿನ್ನಲೆಯ ಮೂಲವನ್ನು ಸ್ವಲ್ಪ ತಿಳಿದುಕೊಂಡಿರುವುದು ಒಳಿತು.
          ಯೋಗದರ್ಶನವು ಮೂಲತಃ ಮೂರು ರೀತಿಯ ವಾಸ್ತವತೆಗಳನ್ನು ಒಪ್ಪಿಕೊಳ್ಳುತ್ತದೆ. ಅವೆಂದರೆ, ಈಶ್ವರ, ಪುರುಷರು ಮತ್ತು ಪ್ರಧಾನ ಅಥವಾ ಪ್ರಕೃತಿ. ಪುರುಷರು ಎಂದರೆ ಪ್ರತ್ಯೇಕ ಜೀವಿಗಳು. ಅವುಗಳು ಚಿದ್ರೂಪರು ಅಥವಾ ಪ್ರಜ್ಞಾ ಸ್ವರೂಪವನ್ನುಳ್ಳವರು ಮತ್ತು ಇವುಗಳು ಅಸಂಖ್ಯಾತವಾಗಿವೆ. ಈಶ್ವರನನ್ನು ‘ಪುರುಷವಿಶೇಷ’ – ವಿಶೇಷ ಪುರುಷ ಅಥವಾ ಅದ್ವಿತೀಯ ಪುರುಷ ಎಂದು ಕರೆಯಲಾಗಿದೆ ಮತ್ತವನ ಇರುವಿಕೆಯನ್ನು ಶಾಸ್ತ್ರಮುಖೇನ ಮಾತ್ರವೇ ಕಂಡುಕೊಳ್ಳಬಹುದು. ಅವನು ಸರ್ವಜ್ಞನು ಅಥವಾ ಎಲ್ಲದರ ಬಗ್ಗೆಯೂ ಜ್ಞಾನವನ್ನು ಹೊಂದಿದವನು. ಪ್ರಕೃತಿಯ ಶೃಂಖಲೆಗಳಿಂದ ಬಂಧನಕ್ಕೊಳಗಾಗದೇ ಇರುವ ಅವನು ನಿತ್ಯಮುಕ್ತನು. ಅವನೇ ಆದಿಗುರು – ಪ್ರಥಮ ಶಿಕ್ಷಕ. ಪ್ರಣವ ಅಥವಾ ಓಂ ಎನ್ನುವುದು ಅವನ ಪ್ರತೀಕ. ಅವನ ಇಚ್ಛೆಯಿಂದ ಪುರುಷರ ಕರ್ಮಕ್ಕನುಗುಣವಾಗಿ ಮೂರುಗುಣಗಳಾದ – ಸತ್ವ, ರಜೋ ಹಾಗು ತಮೋ ಗುಣಗಳಿಂದೊಡಗೂಡಿದ ಪ್ರಕೃತಿಯ ಸಮಾಗಮದಿಂದ ಸೃಷ್ಠಿಯ ಉಗಮವಾಗುತ್ತದೆ. ಪ್ರಕೃತಿಯ ಉತ್ಪನ್ನಗಳಾದ, ಮಹತ್ (ವಿಶ್ವದ ಬುದ್ಧಿ), ಅಹಂಕಾರ(ನಾನು ಎನ್ನುವ ಭಾವನೆ), ಮನಸ್(ವಿಶ್ವದ ಮನಸ್ಸು), ತನ್ಮಾತ್ರೆಗಳು(ಸೂಕ್ಷ್ಮ ಧಾತುಗಳು) ಮೊದಲಾದವುಗಳು ಸಾಂಖ್ಯ ಪದ್ಧತಿಯಲ್ಲಿ ಪ್ರತಿಪಾದಿಸಿರುವಂತೆ ರೂಪುಗೊಳ್ಳುತ್ತವೆ.
          ಪುರುಷನು ಅದು ಹೇಗೋ ಅವಿದ್ಯಾ ಅಥವಾ ಅಜ್ಞಾನದ ಪ್ರಭಾವಕ್ಕೊಳಗಾಗಿ ತನ್ನ ನಿಜ ಸ್ವರೂಪವಾದ ಚಿದ್ರೂಪವನ್ನು ಮರೆತು; ಪ್ರಕೃತಿಯ ವಿವಿಧ ರೂಪಾಂತರಗಳೊಳಗೆ ಸಿಲುಕಿ ಹುಟ್ಟು, ಸಾವು ಮತ್ತವುಗಳ ಸ್ಥಿತ್ಯಂತರಗಳನ್ನು ಅನುಭವಿಸುತ್ತಾನೆ. ಆದರೆ ಜೀವಿಯು ಸಾಧನೆಗಳನ್ನು ಅಂದರೆ ಅಷ್ಟಾಂಗ ಅಥವಾ ಯೋಗದ ಎಂಟು ಸೋಪಾನಗಳನ್ನು ಕೈಗೊಂಡಾಗ ಅವನು ತನ್ನ ಸ್ವರೂಪವನ್ನು ಅರಿಯುತ್ತಾನೆ ಮತ್ತು ತಕ್ಷಣವೇ ಸಂಸಾರದ ಹುಟ್ಟು ಸಾವುಗಳ ಸ್ಥಿತ್ಯಂತರಗಳಿಂದ ಬಿಡುಗಡೆ ಹೊಂದುತ್ತಾನೆ. ಆತ್ಮನು ತನ್ನೊಳಗೆ ಐಕ್ಯಗೊಂಡು, ಸಂಸಾರದಿಂದ ಬಿಡುಗಡೆ ಹೊಂದುವುದನ್ನೇ ಕೈವಲ್ಯವೆನ್ನುತ್ತಾರೆ.
“ಚಿತ್ತವೃತ್ತಿಗಳನಿರೋಧ”ವಾಗಿ ಯೋಗ
          ಪತಂಜಲಿಯು “ಚಿತ್ತವೃತ್ತಿಗಳನಿರೋಧ”ವೇ ‘ಯೋಗ’ವೆಂದು ಕರೆದಿದ್ದಾನೆ (ಯೋಗಸೂತ್ರ ೧.೨). ಚಿತ್ತ ಅಥವಾ ಮನಸ್ಸಿನ ಎಲ್ಲಾ ವೃತ್ತಿ ಅಥವಾ ಮಾರ್ಪಾಟುಗಳನ್ನು  ನಿಯಂತ್ರಣ ಮತ್ತು ನಿಗ್ರಹ(ನಿರೋಧ)ದಲ್ಲಿಟ್ಟರೆ ಪುರುಷ ಅಥವಾ ಆತ್ಮನ ನೈಜ ಸ್ವರೂಪವು ಅನಾವರಣಗೊಳ್ಳುತ್ತದೆ. ಚಿತ್ತವು ಮನಸ್ಸಿನ ಪದಾರ್ಥವಾಗಿದ್ದು ಅದನ್ನು ಅಂತಃಕರಣ (ಒಳಗಿನ ಸಾಧನ), ಮನಸ್ (ಮನಸ್ಸು) ಅಥವಾ ಬುದ್ಧಿ ಮೊದಲಾದ ಶಬ್ದಗಳಿಂದ ಕರೆಯಲಾಗಿದೆ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ ಮೊದಲಾದವುಗಳ ಮುಖಾಂತರ ವಿಷಯ ವಸ್ತುಗಳು ಮನಸ್ಸಿನ ಒಳಗೆ ಉಂಟು ಮಾಡುವ ಆಲೋಚನಾ ತರಂಗಗಳು, ಭಾವನೆಗಳು ಮತ್ತು ಉದ್ವೇಗಗಳನ್ನೇ ಚಿತ್ತವೃತ್ತಿಗಳೆಂದು ಕರೆದಿದ್ದಾರೆ. ಈ ಚಿತ್ತವೃತ್ತಿಗಳು ಅಸಂಖ್ಯಾತವೆಂದು ಕಂಡುಬಂದರೂ ಕೂಡ ಅವುಗಳನ್ನು ಐದು ವರ್ಗಗಳಾಗಿ ವಿಂಗಡಿಸಬಹುದು. ಅವೆಂದರೆ, ‘ಪ್ರಮಾಣ'(ನೈಜ ಜ್ಞಾನದ ಮೂಲಗಳು), ‘ವಿಪರ್ಯಯ'(ಅಸಂಬದ್ಧ ಜ್ಞಾನ), ‘ವಿಕಲ್ಪ'(ಒಂದು ಶಬ್ದವನ್ನು ಕೇಳಿದಾಗ ಮನಸ್ಸಿನಲ್ಲಿ ಮೂಡುವ ಚಿತ್ರ), ‘ನಿದ್ರಾ'(ನಿದ್ದೆ) ಮತ್ತು ‘ಸ್ಮೃತಿ'(ನೆನಪು).
          ‘ಪ್ರಮಾಣ’ವೆಂದರೆ ಸರಿಯಾದ ಜ್ಞಾನವನ್ನು ಹೊಂದಲು ಇರುವ ಮಾಧ್ಯಮ. ಪ್ರಮಾಣಗಳು ಮೂರು – ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ) ಮತ್ತು ಆಗಮ (ನಂಬಲರ್ಹ ವ್ಯಕ್ತಿಯ ಮಾತು ಹಾಗೂ ಶ್ರುತಿಗಳ ವಾಕ್ಯಗಳು). ‘ವಿಪರ್ಯಯ’ವೆಂದರೆ ಅಸಂಬದ್ಧ (ಅಸ್ಪಷ್ಟ)ವಾದ ಜ್ಞಾನ – ಹಗ್ಗವನ್ನು ಹಾವೆಂದು ಅರೆಕತ್ತಲಿನಲ್ಲಿ ತಿಳಿಯುವಂತೆ. ‘ವಿಕಲ್ಪ’ವೆಂದರೆ ಒಂದು ಶಬ್ದ ಅಥವಾ ಶಬ್ದಗಳನ್ನು ಕೇಳಿದೊಡನೆ ಮನಸ್ಸಿನಲ್ಲಿ ಮೂಢುವ ಚಿತ್ರ; ಉದಾಹರಣೆಗೆ “ರಾಹುವಿನ ತಲೆ” (ಕುಗ್ರಹವಾದ ರಾಹುವಿಗೆ ತಲೆಮಾತ್ರವಿದ್ದು ದೇಹದ ಉಳಿದ ಭಾಗವು ಇರುವುದಿಲ್ಲ). ‘ನಿದ್ರಾ’ ಅಥವಾ ನಿದ್ದೆಯ ಸ್ಥಿತಿಯೆಂದರೆ ತಮಸ್ಸಿನ ಆಧಿಪತ್ಯದಿಂದ ಮನಸ್ಸಿನಲ್ಲಿ ಏಳುವ ವಿಕಾರಗಳು. ‘ಸ್ಮೃತಿ’ಯೆಂದರೆ ಹಿಂದಿನ ಅನುಭವಗಳ ನೆನಪು.
          ಚಿತ್ತವೃತ್ತಿಗಳು ಪುರುಷನಿಗೆ ಅವಿದ್ಯೆ(ಅಜ್ಞಾನ), ಅಸ್ಮಿತಾ(ತಾನೆ ಎನ್ನುವ ಅಹಂಭಾವ) ಮೊದಲಾದವುಗಳಿಂದ ‘ಕ್ಲೇಷ’ ಅಥವಾ ದುಃಖವನ್ನು ಉಂಟು ಮಾಡಿದಾಗ ಅವನ್ನು ‘ಕ್ಲಿಷ್ಟ’ವೆನ್ನುತ್ತಾರೆ. ಯಾವಾಗ ಚಿತ್ತವೃತ್ತಿಗಳು ಪುರುಷನು ಅವುಗಳಿಂದ ಬಿಡುಗಡೆಹೊಂದಲು ಸಹಾಯ ಮಾಡುತ್ತವೆಯೋ ಆಗ ಅವು ‘ಅಕ್ಲಿಷ್ಟ’ವೆನಿಸುತ್ತವೆ.
          ಚಿತ್ತ ಅಥವಾ ಮನಸ್ಸಿಗೆ ಐದು ಹಂತಗಳಿವೆ: ಕ್ಷಿಪ್ತ(ಚುರುಕು), ಮೂಢ(ನಿರಾಸಕ್ತಿ), ವಿಕ್ಷಿಪ್ತ (ಚಂಚಲ ಅಥವಾ ಚದುರಿದ), ಏಕಾಗ್ರ (ತಲ್ಲೀನ) ಮತ್ತು ನಿರುದ್ಧ (ನಿರ್ಲಿಪ್ತ ಅಥವಾ ನಿಗ್ರಹ). ಮೊದಲ ಮೂರು ಹಂತಗಳಲ್ಲಿ ಯೋಗವು ಸಾಧ್ಯವಿಲ್ಲ ಏಕೆಂದರೆ ಮನಸ್ಸು ಆಗ ರಜಸ್ಸು ಹಾಗು ತಮಸ್ಸಿನ ಆಧೀನಕ್ಕೊಳಪಟ್ಟಿರುತ್ತದೆ. ಯಾವಾಗ ಸತ್ವದ ಆಧಿಪತ್ಯವು ಉಂಟಾಗುತ್ತದೋ ಅದು ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಿ ಅದನ್ನು ಏಕಾಗ್ರತೆಯಿಂದ ‘ಸಂಪ್ರಜ್ಞತ-ಸಮಾಧಿ’ಯ(ನಿಖರವಾದ ಧ್ಯಾನದಿಂದ ಲಕ್ಷದ ಬಗ್ಗೆ ಸ್ಪಷ್ಟ ತಿಳುವಳಿಕೆ ಉಂಟಾಗುವ ಸ್ಥಿತಿ) ಕಡೆಗೆ ಕೊಂಡೊಯ್ಯುತ್ತದೆ. ಕಡೆಯದಾದ ನಿರುದ್ಧ ಸ್ಥಿತಿಯಲ್ಲಿ ಯಾವುದೇ ರೀತಿಯ ಚಿತ್ತವೃತ್ತಿಗಳು ಉತ್ಪನ್ನವಾಗದೆ ಮನಸ್ಸು ‘ಅಸಂಪ್ರಜ್ಞ-ಸಮಾಧಿ’ಯ ಸ್ಥಿತಿಗೆ ಕೊಂಡೊಯ್ಯಲ್ಪಡುತ್ತದೆ. ಈ ಸ್ಥಿತಿಯಲ್ಲಿ ಯಾವುದೇ ‘ಲಕ್ಷ್ಯ’ದ ಬಗ್ಗೆ ಪುರುಷನಿಗೆ ಪರಿವೆಯಿರುವುದಿಲ್ಲ ಆದರೆ ಅವನು ತನ್ನೊಳಗೆ ಅಂದರೆ ಆತ್ಮದ ಸ್ವರೂಪದೊಂದಿಗೆ ಸಂಪೂರ್ಣ ತನ್ಮಯನಾಗುತ್ತಾನೆ. ಆವಾಗ ಪುರುಷನು ಮುಕ್ತನಾಗುತ್ತಾನೆ; ಅಂದರೆ ಬಂಧನದಿಂದ ಬಿಡುಗಡೆಗೊಂಡ ಆತ್ಮನಾಗುತ್ತಾನೆ – ಅಂದರೆ ಪ್ರಕೃತಿಯ ಎಲ್ಲಾ ಸಂಕಷ್ಟಗಳಿಂದ ಪಾರಾದವನಾಗಿರುತ್ತಾನೆ.
ಯೋಗಕ್ಕೆ ಬರುವ ಪ್ರತಿರೋಧಗಳು
          ಪತಂಜಲಿಯು ಯೋಗಕ್ಕೆ ಬರುವ ಅಡ್ಡಿಗಳನ್ನು ‘ಅಂತರಾಯ'(ಮಧ್ಯದಲ್ಲಿ ಬರುವವು)ಗಳೆಂದು  ಕರೆಯುತ್ತಾನೆ ಮತ್ತು ಅವು ಒಂಭತ್ತು ವಿಧವಾದವುಗಳು ಎಂದು ಪಟ್ಟಿ ಮಾಡುತ್ತಾನೆ (೧.೩೦). ಅವೆಂದರೆ, ವ್ಯಾಧಿ (ರೋಗ/ಖಾಯಿಲೆ), ಸ್ಥ್ಯಾನ(ಅಯಿಷ್ಟತೆ/ನಿರಾಸಕ್ತಿ), ಸಂಶಯ (ಶಂಖೆ), ಪ್ರಮಾದ (ಅವಘಡ), ಆಲಸ್ಯ(ಸೋಮಾರಿತನ), ಅವಿರತಿ (ವೈರಾಗ್ಯ ಹೀನತೆ/ಪ್ರಾಪಂಚಿಕ ವಸ್ತುಗಳಲ್ಲಿ ಆಸಕ್ತಿ), ಭ್ರಾಂತಿದರ್ಶನ (ತಪ್ಪು ತಿಳುವಳಿಕೆ/ಅನುಭವ), ಅಲಬ್ಧಭೂಮಿಕತ್ವ(ಯೋಗದ ವಿವಿಧ ಹಂತಗಳನ್ನು ಮುಟ್ಟಲಾಗದೇ ಇರುವುದು) ಮತ್ತು ಅನವಸ್ಥಿತತ್ವ (ಯೋಗದ ಸ್ಥಿತಿಯಲ್ಲಿ ನಿಲ್ಲಲಾಗದೇ ಇರುವುದು).
          ಖಾಯಿಲೆಯನ್ನು ಸೂಕ್ತವಾದ ಚಿಕಿತ್ಸೆಯಿಂದ ಶಮನಗೊಳಿಸಬೇಕು. ನಿರಾಸಕ್ತಿಯನ್ನು ಮನೋಬಲವನ್ನು ಗಟ್ಟಿಗೊಳಿಸಿಕೊಳ್ಳುವುದರ ಮೂಲಕ ನಿವಾರಿಸಿಕೊಳ್ಳಬೇಕು. ಸಂಶಯವನ್ನು ಶ್ರುತಿಗಳ ಮತ್ತು ಗುರುಗಳ ಮೇಲೆ ನಂಬಿಕೆಯಿರಿಸಿ ಹೊಡೆದೋಡಿಸಬೇಕು. ನಿರಂತರ ಎಚ್ಚರಿಕೆಯಿಂದ ಪ್ರಮಾದಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಆಲಸ್ಯತನ ಅಥವಾ ಸೋಮಾರಿತನವನ್ನು ನಿರಂತರ ಚಟುವಟಿಕೆಯಿಂದ ಗೆಲ್ಲಬೇಕು. ಅವಿರತಿಯನ್ನು ವಿವೇಕ (ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ವಿವೇಚನೆ) ಮತ್ತು ವೈರಾಗ್ಯ(ಪ್ರಾಪಂಚಿಕತೆಯನ್ನು ತೊರೆಯುವುದು) ಇವುಗಳ ಮೂಲಕ ಶೂನ್ಯವಾಗಿಸಬೇಕು. ಕಡೆಯ ಮೂರು ಪ್ರತಿರೋಧಗಳಾದ ಭ್ರಾಂತಿದರ್ಶನ, ಅಲಬ್ಧಭೂಮಿಕತ್ವ ಮತ್ತು ಅನವಸ್ಥಿತತ್ವಗಳನ್ನು ಯೋಗ್ಯ ಗುರುವಿನ ಮಾರ್ಗದರ್ಶನದಂತೆ ನಡೆದು ಇಲ್ಲವಾಗಿಸಿಕೊಳ್ಳಬೇಕು.
          ಪತಂಜಲಿಯು ಮನಸ್ಸನ್ನು ವಿಚಲಿತಗೊಳಿಸುವ ಇನ್ನೂ ಐದು ಅಂತರಾಯಗಳನ್ನು ಈ ಪಟ್ಟಿಗೆ ಸೇರಿಸುತ್ತಾನೆ. ಅವೆಂದರೆ: ದುಃಖ (ಯಾತನೆ/ನೋವು), ದೌರ್ಮನಸ್ಯ (ಹತಾಶೆ/ಆಶಾಭಂಗ), ಅಂಗಮೆಜಯತ್ವ(ದೇಹದ ಅಂಗಗಳ/ಕೈಕಾಲುಗಳ ಅವಿಶ್ರಾಂತತೆ), ಶ್ವಾಸ ಮತ್ತು ಪ್ರಶ್ವಾಸ (ಲಯಬದ್ಧವಾಗಿ ಉಸಿರನ್ನು  ಬಿಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಉಂಟಾಗುವ ತೊಂದರೆ). ಇವುಗಳನ್ನು ಕೂಡ ಸೂಕ್ತ ಕ್ರಮಗಳಿಂದ ನಿವಾರಿಸಿಕೊಳ್ಳಬೇಕು.
ಅನುಸರಿಸಬಹುದಾದ ಕೆಲವು ಸೂಚನೆಗಳು
          ಪತಂಜಲಿಯು ಯೋಗಾಸಕ್ತರಿಗೆ ಹಲವಾರು ಸಲಹೆ ಸೂಚನೆಗಳನ್ನು ಕೊಡುತ್ತಾನೆ; ಇದರಿಂದ ಯೋಗ ಮಾರ್ಗದಲ್ಲಿರುವ ಅಂತರಾಯಗಳನ್ನು ಹೋಗಲಾಡಿಸಿಕೊಂಡು ಹೆಚ್ಚಿನ ಏಕಾಗ್ರತೆಯನ್ನು ಗಳಿಸಿಕೊಂಡು ಅಂತಿಮವಾಗಿ ಸಮಾಧಿ ಅಥವಾ ತನ್ನ/ಆತ್ಮದ ಕುರಿತಾದ ಅಸಾಮಾನ್ಯ ಅನುಭವಡೆಗೆ ಸಾಗಬಹುದು. ಇವುಗಳಲ್ಲಿ ವೈರಾಗ್ಯ ಮತ್ತು ಅಭ್ಯಾಸಗಳು ಮೊದಲು ಬರುತ್ತವೆ. ಮೊದಲನೆಯದಾದ ವೈರಾಗ್ಯವು ಪ್ರಾಪಂಚಿಕತೆಯನ್ನು ತೊರೆಯುವುದು ಅಥವಾ ವಿಷಯ ವಸ್ತುಗಳ ಕಡೆಗೆ ಅನಾಸಕ್ತಿಯನ್ನು ಬೆಳೆಸಿಕೊಳ್ಳುವುದರೆಡೆಗೆ ಮನಸ್ಸನ್ನು ಕೊಂಡೊಯ್ದರೆ; ಅಭ್ಯಾಸ (ನಿರಂತರ ಪ್ರಯತ್ನ)ವು ದೇವರೆಡೆಗೆ ಅಥವಾ ಆತ್ಮನನ್ನು ತಿಳಿಯುವುದರೆಡೆಗೆ ಕೊಂಡೊಯ್ಯುತ್ತದೆ.
          ಬೇರೆ ಕೆಲವು ಸೂಚನೆಗಳೆಂದರೆ: ಯಾರು ಸಂತೋಷದಿಂದ ಇರುತ್ತಾರೋ ಅವರ ಬಗ್ಗೆ ಮತ್ಸರ ತಳೆಯದೆ ಅವರೊಡನೆ ಸ್ನೇಹಭಾವ(ಮೈತ್ರಿ) ಇಟ್ಟುಕೊಳ್ಳುವುದು; ಕಷ್ಟಕಾರ್ಪಣ್ಯದಿಂದ ಬಳಲುವವರನ್ನು ಅನುಕಂಪದಿಂದ (ಕರುಣೆಯಿಂದ) ಕಾಣುವುದು; ಕ್ರಮಬದ್ಧ ಉಸಿರಾಟದಿಂದ ಪ್ರಾಣಶಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು; ತನ್ನ ಹೃದಯ ಮಧ್ಯದಲ್ಲಿರುವ ಬೆಳಕಿನ ಮೇಲೆ ಧ್ಯಾನಿಸುವುದು; ಮಹಾತ್ಮರ ಮನಸ್ಸಿನ ಬಗೆಗೆ ಚಿಂತನೆ ಮಾಡುವುದು; ಉಚ್ಛಸ್ಥಿತಿಗೆ ಕೊಂಡೊಯ್ದ ಕನಸುಗಳೇನಾದರೂ ಬಿದ್ದಿದ್ದರೆ ಅವುಗಳನ್ನು ಮೇಲಿಂದ ಮೇಲೆ ಜ್ಞಾಪಿಸಿಕೊಳ್ಳುವುದು; ದೇವ-ದೇವತೆಗಳ ರೂಪಗಳ ಬಗ್ಗೆ ಅಥವಾ ಚಂದ್ರನಂತಹ ಗ್ರಹಗಳ ಬಗ್ಗೆ ಅಥವಾ ತನ್ನ ದೇಹದಲ್ಲಿರುವ ಮನೋಬಿಂದುಗಳ ಬಗ್ಗೆ ಎಡಬಿಡದೆ ಮನನ ಮಾಡುವುದು.
          ಮೇಲೆ ತಿಳಿಸಿದ ಎಲ್ಲಾ ವಿಧಾನಗಳು ಆಧ್ಯಾತ್ಮ ಪಿಪಾಸುಗಳಿಗೆ ಮನಃಶಾಂತಿಯನ್ನುಂಟು ಮಾಡುವುದಲ್ಲದೆ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಹಾಯಕವಾಗುತ್ತವೆ.
ಅಷ್ಟಾಂಗ ಅಥವಾ ಎಂಟು ಸೋಪಾನಗಳು
          ಪುರುಷ ಅಥವಾ ಜೀವಾತ್ಮನು (ಪ್ರತ್ಯೇಕ ಆತ್ಮನು) ಪ್ರಕೃತಿಯ ಉತ್ಪನ್ನವಾದ “ಮನೋದೈಹಿಕ ಸಂಕೀರ್ಣ”(ಮನಸ್ಸಿನಿಂದ ಕೂಡಿದ ದೇಹ)ದ ಜೊತೆಗೆ ಹೊಂದಿದ ಅತಿಯಾದ ಮಮತೆಯಿಂದಾಗಿ ಭಂದನಕ್ಕೊಳಗಾಗಿದ್ದಾನೆ. ಯೋಗದ ಗುರಿಯು ವಿಯೋಗ ಅಂದರೆ ಪ್ರಕೃತಿಯ ಪಾಶದಿಂದ ಪುರುಷನನ್ನು ಬಿಡುಗಡೆಗೊಳಿಸುದೇ ಆಗಿದೆ. ಈ ಮುಕ್ತಿಯು ವಿವೇಕಖ್ಯಾತಿಯಿಂದ ಬರುತ್ತದೆ. (ವಿವೇಕ=ಯುಕಾಯುಕ್ತ ವಿವೇಚನೆ ಮತ್ತು ಖ್ಯಾತಿ=ಜ್ಞಾನ).
          ಯೋಗಸೂತ್ರಗಳು ಹಂತ ಹಂತವಾಗಿ ಎಂಟು ಹೆಜ್ಜೆಗಳುಳ್ಳ ಶಿಕ್ಷಣ ಕ್ರಮವನ್ನು ಸೂಚಿಸುತ್ತವೆ. ಅವುಗಳೆಂದರೆ: ಯಮ (ನಿಗ್ರಹ), ನಿಯಮ (ಕಟ್ಟಳೆ), ಆಸನ (ಭಂಗಿ), ಪ್ರಾಣಾಯಾಮ (ಪ್ರಾಣಶಕ್ತಿಗಳ ನಿಯಂತ್ರಣ), ಪ್ರತ್ಯಾಹಾರ(ಹಿಂತೆಗೆದುಕೊಳ್ಳುವ ಪ್ರಕ್ರಿಯೆ), ಧಾರಣ(ಒಟ್ಟುಗೂಡಿಸುವಿಕೆ ಅಥವಾ ಕೇಂದ್ರೀಕರಿಸುವಿಕೆ), ಧ್ಯಾನ (ಏಕಾಗ್ರಗೊಳಿಸುವಿಕೆ ಅಥವಾ ಲಕ್ಷದ ಮೇಲೆ ಗಮನಕೊಡುವಿಕೆ), ಮತ್ತು ಸಮಾಧಿ (ಸಂಪೂರ್ಣ ತಲ್ಲೀನತೆ/ತನ್ಮಯವಾಗುವಿಕೆ). ಯೋಗ ಸ್ಥಿತಿಯ ಪ್ರಾಪ್ತಿಯಲ್ಲಿ ಇವುಗಳಲ್ಲಿ ಮೊದಲ ಐದು ನಿಯಮಗಳನ್ನು ‘ಬಹಿರಂಗ’ (ಬಾಹ್ಯ) ಮತ್ತು ಕಡೆಯ ಮೂರನ್ನು ‘ಅಂತರಂಗ’ (ಒಳಗಿನ) ಸಾಧನೆಗಳೆನ್ನುತ್ತಾರೆ.
          ಅಹಿಂಸಾ (ನೋವುಂಟು ಮಾಡದೇ ಇರುವುದು), ಸತ್ಯ (ನಿಜವನ್ನು ನುಡಿಯುವುದು), ಅಸ್ತೇಯ (ಕಳ್ಳತನ ಮಾಡದೇ ಇರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ (ದಾನವನ್ನು ಸ್ವೀಕರಿಸದೇ ಇರುವುದು) ಇವುಗಳು ಮೊದಲನೆಯ ಹಂತವಾದ ಯಮದ ನಿಯಮಾವಳಿಗಳು.
          ಎರಡನೇ ಹಂತವಾದ ನಿಯಮದಲ್ಲಿ ಶೌಚ (ಪರಿಶುದ್ಧತೆ), ಸಂತೋಷ(ತೃಪ್ತಿ), ತಪಸ್ಸು(ತ್ರಿಕರಣ ಶುದ್ಧತೆ ಅಂದರೆ ಕಾಯ, ವಾಚ, ಮನಸಾ ನಿಗ್ರಹವನ್ನು ಹೊಂದಿರುವುದು), ಸ್ವಾಧ್ಯಾಯ (ವೇದ ಶಾಸ್ತ್ರಗಳ ಪಾರಾಯಣ ಮತ್ತು ಓಂ ಮುಂತಾದ ಮಂತ್ರಗಳ ಪುನರುಚ್ಛಾರಣೆ ಮಾಡುವುದು), ಮತ್ತು ಈಶ್ವರಪ್ರಣಿಧಾನ (ದೇವರ ಮೇಲೆ ಭಕ್ತಿಯನ್ನಿರಿಸುವುದು) ಇವುಗಳನ್ನು ಒಳಗೊಂಡಿದೆ.
          ಶೌಚವು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದರೆ ಎರಡನೆಯದಾದ ಸಂತೋಷವು ವೈಯ್ಯಕ್ತಿಕ ಪರಿಶುದ್ಧತೆಯನ್ನು ಉಂಟು ಮಾಡುತ್ತವೆ. ಇತರ ಮೂರು ನಿಯಮಗಳಾದ ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳನ್ನು ಒಟ್ಟುಗೂಡಿಸಿ ಅವುಗಳನ್ನು ಪತಂಜಲಿಯು ‘ಕ್ರಿಯಾಯೋಗ’ವೆಂದು ಕರೆದಿದ್ದಾನೆ. ಇದು ಯೋಗಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಮತ್ತು ಹತ್ತಿರದ ಮಾರ್ಗವಾಗಿದೆ.
          ಆಸನವೆಂದರೆ ಯೋಗಾಭ್ಯಾಸವನ್ನು ಕೈಗೊಳ್ಳುವ ವ್ಯಕ್ತಿಯು ಅನುಕೂಲಕರವಾಗಿ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಅನುವಾಗಿರುವ ಭಂಗಿ. ಪ್ರಾಣಾಯಾಮವೆಂದರೆ ಕ್ರಮಬದ್ಧ ಉಸಿರಾಟದ ಮೂಲಕ ಜೀವನಾಧಾರವಾದ ಪ್ರಾಣವಾಯುಗಳನ್ನು ನಿಯಂತ್ರಿಸುವುದು. ಗ್ರಹಣೇಂದ್ರಿಯಗಳನ್ನು ಅಥವಾ ಪಂಚೇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಸೆಳೆದುಕೊಂಡಾಗ ಅವು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮನಸ್ಸಿನೊಂದಿಗೆ ಏಕೀಕರಣಗೊಳ್ಳುತ್ತವೆ; ಇದನ್ನೇ ಪ್ರತ್ಯಾಹಾರವೆಂದು ಕರೆಯುತ್ತಾರೆ.
          ಮುಂದಿನ ಮೂರು ಹಂತಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಒಂದೇ ಕ್ರಿಯೆಯ ಮುಂದುವರೆದ ಹೆಜ್ಜೆಗಳು. ಧಾರಣದಲ್ಲಿ ಮನಸ್ಸು ಲಕ್ಷ್ಯವಿಡಬೇಕಾದ ವಸ್ತುವಿನ ಮೇಲೆ ಕೇಂದ್ರಿತವಾಗಿರುತ್ತದೆ. ಈ ಏಕಾಗ್ರತೆಯು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯಲ್ಪಡುವ ಎಣ್ಣೆಯಂತೆ ನಿರಾತಂಕವಾಗಿ ಹರಿಯುವಂತಹ ಸ್ಥಿತಿಯಲ್ಲಿದ್ದಾಗ ಅದು ಧ್ಯಾನವೆನಿಸುಕೊಳ್ಳುತ್ತದೆ. ಯಾವಾಗ ಧ್ಯಾನವು ಪಕ್ವಗೊಂಡು ವ್ಯಕ್ತಿಯು ತನ್ನ ಇರಿವನ್ನು ಸಹ ಮರೆತು ಲಕ್ಷ್ಯದೊಂದಿಗೆ ತನ್ಮಯತೆಯನ್ನು ಹೊಂದುತ್ತಾನೋ ಆ ಸ್ಥಿತಿಯನ್ನು ಸಮಾಧಿಯೆನ್ನುತ್ತಾರೆ. ಸಮಾಧಿ ಸ್ಥಿತಿಯು ಈಶ್ವರಪ್ರಣಿಧಾನ ಅಥವಾ ಭಗವದ್ಭಕ್ತಿಯಿಂದಲೂ ಲಭ್ಯವಾಗುತ್ತದೆ.
          ಧಾರಣ, ಧ್ಯಾನ ಮತ್ತು ಸಮಾಧಿ ಈ ಮೂರನ್ನೂ ಒಟ್ಟಾಗಿಸಿ ಪತಂಜಲಿಯು ಅದನ್ನು ‘ಸಂಯಮ’ವೆಂಬ ಶಬ್ದದಿಂದ ಕರೆದಿದ್ದಾನೆ. ಮತ್ತು ಈ ಸಂಯಮವು ಯಾವಗಲೂ ಒಂದೇ ಒಂದು ವಸ್ತುವಿನ ಮೇಲಿರಬೇಕು.
ಯೋಗಸಿದ್ಧಿಗಳು
          ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು  ಸತ್ಯಾನ್ವೇಷಕರ ಮನದಲ್ಲಿ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಉದಾಹರಣೆಗೆ ಯಾವ ಮನುಷ್ಯನು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾಗಿಸಿಕೊಂಡಿರುತ್ತಾನೋ ಅವನ ಬಳಿಯಲ್ಲಿ ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಯಾವ ವ್ಯಕ್ತಿಯಲ್ಲಿ ಸತ್ಯವು ಬೇರೂರಿರುತ್ತದೆಯೋ ಆ ವ್ಯಕಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ (ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).
          ‘ಸಂಯಮ’ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ್(ನೀರು) ಇವುಗಳ ಮೇಲಿನ ‘ಸಂಯಮ’ದಿಂದ ಯೋಗಿಯು ಅಷ್ಟಸಿದ್ಧಿ ಅಥವಾ ಎಂಟು ಸುತ್ತಿನ ಶಕ್ತಿಯನ್ನು ಪಡೆಯುತ್ತಾನೆ; ‘ಅಣಿಮಾ'(ಅಣುವಿನಷ್ಟು ಚಿಕ್ಕದಾಗುವಿಕೆ), ‘ಮಹಿಮಾ'(ಎಷ್ಟು ಬೇಕೋ ಅಷ್ಟು ಎತ್ತರಕ್ಕೆ ಬೆಳೆಯುವುದು) ಮೊದಲಾದವು (ಯೋಗಸೂತ್ರ ೩.೪೪,೪೫). ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು,  ಮೊದಲಾದವು.
          ಆದರೆ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವನ್ನು ವಿವರಿಸಿದರೂ (ವಿಜ್ಞಾನದ ಭಾಗವಾಗಿರುವುದರಿಂದ ಅವುಗಳನ್ನು ವಿವರಿಸಿದ್ದಾನೆ); ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಏಕೆಂದರೆ ಇವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ ‘ಕೈವಲ್ಯ’ ಅಥವಾ ‘ಮುಕ್ತಿ’ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ ‘ಕೈವಲ್ಯ’ ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ ‘ಪ್ರಾರಬ್ಧ ಕರ್ಮ'(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು  ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.
ಸಮಾರೋಪ
          ಯೋಗದರ್ಶನವು ಕೇವಲ ಪ್ರಾಚೀನವಾದ ಪದ್ಧತಿ ಮಾತ್ರವಾಗಿರದೆ ಅನುಷ್ಠಾನಯೋಗ್ಯವೂ ಆಗಿದೆ. ವೇದಾಂತ ದರ್ಶನಗಳೂ ಕೂಡ ಅದರ ಸಾಧನಾ ಭಾಗಗಳನ್ನು ಒಪ್ಪಿಕೊಳ್ಳುತ್ತವೆ. ಆಧುನಿಕ ಮನಃಶಾಸ್ತ್ರಜ್ಞರು ಕೂಡ ಮನಸ್ಸಿನ ಸ್ವಾಸ್ಥ್ಯವನ್ನು ಮತ್ತೆ ಪಡೆಯುವಲ್ಲಿ ಮತ್ತು ಅದನ್ನು ಕಾಪಾಡಿಕೊಳ್ಳುವಲ್ಲಿ ಇದರ ಉಪಯುಕ್ತತೆಯ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಯೋಗದ ವಿಧಾನ ಮತ್ತು ಕೌಶಲಗಳು ಪ್ರಪಂಚದಾದ್ಯಂತ ಇಂದು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿವೆ. ಮೊದಲೆರಡು ನಿಯಮಾವಳಿಗಳಾದ ಯಮ ಮತ್ತು ನಿಯಮಗಳು ವ್ಯಕ್ತಿಗೆ ಒಳಿತುಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಾಯಕವೆನಿಸುತ್ತವೆ. ವಿವಿಧ ಆಸನಗಳು ಅಥವಾ ಚೆನ್ನಾಗಿ ಪ್ರಚಲಿತವಿರುವ ಯೋಗಾಸನಗಳು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಮರಳಿ ಪಡೆಯಲು ಪೂರಕವಾಗಿವೆ. ಆದ್ದರಿಂದ ಯೋಗ ಪದ್ಧತಿಯು ನಿಧಾನವಾಗಿ ಸಾರ್ವಜನಿಕ ಮನ್ನಣೆಯನ್ನು ಗಳಿಸಿಕೊಳ್ಳುತ್ತಿದೆ.

Leave a Reply