CATEGORIES

NEWSLETTER


 

ದರ್ಶನಗಳ ಸಾಮಾನ್ಯ ಪರಿಚಯ

 

ಸಾಮಾನ್ಯ ಪರಿಚಯ
ತತ್ವಜ್ಞಾನದ ಅವಶ್ಯಕತೆ:
          ಒಮ್ಮೆ ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಬಯಕೆಗಳು ಈಡೇರಿದರೆ ಅವನು ಸಹಜವಾಗಿ ಜೀವನದ ಉದ್ದೇಶವೇನು ಎಂದು ಅನ್ವೇಷಿಸತೊಡಗುತ್ತಾನೆ. ಈ ಅನ್ವೇಷಣೆಯ ಪರಿಣಾಮವೇ ತತ್ವಜ್ಞಾನ ಅಥವಾ ತತ್ವಶಾಸ್ತ್ರ. ಸಾಮಾನ್ಯ ಅರ್ಥದಲ್ಲಿ ತತ್ವಶಾಸ್ತ್ರವೆಂದರೆ “ಜ್ಞಾನದ ಬಗೆಗಿನ ಪ್ರೀತಿ” ಎನ್ನುವುದು. ಆದರೆ, ಭಾರತೀಯ ಚಿಂತಕರು ಬೌದ್ಧಿಕ ಕಸರತ್ತಿನಿಂದ ದೊರೆಯ ಬಹುದಾದ ಈ ರೀತಿಯ ಜ್ಞಾನದ ಬಗೆಗಿನ ಪ್ರೀತಿಯನ್ನು ಬದಿಗಿರಿಸಿ ಮುಂದೆ ಸಾಗಿ ಹೋಗಿ ತಮಗೆ ಜೀವನದ  ಔನ್ನತ್ಯವನ್ನು ತಿಳಿಸಿಕೊಡುವ ಅತೀಂದ್ರಿಯ ಅನುಭವದ ಹೊಸ್ತಿಲಿನಲ್ಲಿ ಬಂದು ನಿಂತರು. ಈ  ರೀತಿಯ ವಿಶೇಷವಾದ ಅನುಭೂತಿಯಿಂದಲೇ ಅವರಿಗೆ ಅಂತಿಮ “ದರ್ಶನ”ವಾದದ್ದು (ಗೋಚರಿಸಿದ್ದು ಅಥವಾ ಅನುಭವವಾದದ್ದು.)
ದರ್ಶನಗಳ ಮೂಲಭೂತ ಉದ್ದೇಶ:
          ಬಹುತೇಕ ಎಲ್ಲ ದರ್ಶನಗಳೂ, ಅತ್ಯಂತ ಕಠಿಣ ಪರಿಶ್ರಮವನ್ನು ಕೈಗೊಂಡಾಗಲೂ ಕೂಡ ಮಾನವನ ಜೀವನ ದುಗುಡದಿಂದ ಕೂಡಿದ್ದನ್ನು ಕಂಡುಕೊಂಡವು. ಆದ್ದರಿಂದ ಮಾನವ ಈ ರೀತಿಯ ಬವಣೆಗಳಿಂದ ಕೇವಲ ಈ ಹೊತ್ತು ಅಥವಾ ನಾಳೆಗೆ ಮಾತ್ರವೇ ಬಿಡುಗಡೆಯನ್ನು ಪಡೆಯದೆ; ಎಲ್ಲ ಕಾಲಕ್ಕೂ ಶಾಶ್ವತವಾದ ಮುಕ್ತಿಯನ್ನು ಪಡೆಯ ಬೇಕು ಎನ್ನುವ ಮಹೋನ್ನತ ಗುರಿಯನ್ನು ಎಲ್ಲ ದರ್ಶನಗಳೂ ತಮ್ಮ ಮೂಲಭೂತ ಉದ್ದೇಶವನ್ನಾಗಿ ಹೊಂದಿದ್ದವು.
ಅನುಸರಿಸಿದ ವಿಧಾನಗಳು:
          ಜೀವನದ ನಿಜವಾದ ಅರ್ಥವನ್ನು ತಿಳಿಯಲು ನಾವು ಹೊರಗೆ ಹುಡುಕದೆ ಅದಕ್ಕೆ ಉತ್ತರವನ್ನು ತಮ್ಮೊಳಗೆ ಕಂಡುಕೊಳ್ಳಬೇಕೆನ್ನುವುದನ್ನು ಬಹುಶಃ ಮನುಷ್ಯನಲ್ಲಿರುವ ಅಂತರಾಳದ ತುಮುಲವೊಂದು (ಒಂದು ಒಳದನಿ) ಅಥವಾ ತನ್ನರಿವಿಗೆ ಬಾರದ ಆಧ್ಯಾತ್ಮದ ಬಯಕೆಯೊಂದು; ಹಿಂದೂ ತತ್ವಶಾಸ್ತ್ರಜ್ಞರನ್ನು ಆತ್ಮಾವಲೋಕನದ ದಾರಿಯೆಡೆಗೆ ಕೊಂಡೊಯ್ದಿರಬೇಕು. ಈಗ ನಾವು ಷಡ್ದರ್ಶನಗಳೆಂದು ಕರೆಯುವ ಆರು ವಿಧಾನಗಳ ಮೂಲಕ ಅವರು ಆ ಹಾದಿಯಲ್ಲಿ ಸಾಗಿದರು.
           ಜೀವನದ ಸಮಸ್ಯೆಗಳ ನಿವಾರಣೆಗೆ ಒಂದು ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಒಮ್ಮೆ ಜ್ಞಾನ ಪಿಪಾಸುಗಳು ಮತ್ತು ಋಷಿಮುನಿಗಳು ಒಂದೆಡೆ ಸಭೆ ಸೇರಿದರು. ಈ ಸಮಸ್ಯೆಗೆ ಉತ್ತರವನ್ನು ಏಕಾಂತ ತಪಸ್ಸಿನ ಮೂಲಕ ಕಂಡುಕೊಳ್ಳಬೇಕೆನ್ನುವುದನ್ನು ಆ ಸಭೆಯು ಅಂಗೀಕರಿಸಿತೆಂದು ಶ್ವೇತಾಶ್ವತರ ಉಪನಿಷತ್ತಿನ ಒಂದು ಶ್ಲೋಕ (೧-೧.೩) ತಿಳಿಸುತ್ತದೆ.
          ಹೀಗಾಗಿ “ತಪಸ್ಸು” (ಪರಿಶುದ್ಧವಾದ ಜೀವನವನ್ನು ನಡೆಸುವುದು), “ಶ್ರವಣ” (ಮಹತ್ತಾದ ಸತ್ಯಗಳ ಬಗ್ಗೆ ಋಷಿಮುನಿಗಳಿಂದ ಕೇಳಿ ತಿಳಿದುಕೊಳ್ಳುವುದು) ಮತ್ತು “ಮನನ” (ಕೇಳಿದ ವಿಷಯದ ಬಗ್ಗೆ ದೀರ್ಘವಾದ ಚಿಂತನೆಯನ್ನು ನಡೆಸುವುದು) ಮಾಡುವುದು ಹಿಂದೂ ತತ್ವಶಾಸ್ತ್ರಜ್ಞರ ಮುಖ್ಯವಿಧಾನವಾಗಿತ್ತು.
ಶ್ರುತಿ ಅಥವಾ ವೇದಗಳ ಸ್ಥಾನ:
          ವಿವಿಧ ದರ್ಶನಗಳನ್ನು ಪ್ರತಿಪಾದಿಸಿದ ಅಥವಾ ಸ್ಥಾಪಿಸಿದ ಋಷಿಮುನಿಗಳು (ದ್ರಷ್ಠಾರರು) ಬಹುಬೇಗನೇ ಮಾನವನ ಬುದ್ಧಿಮತ್ತೆಯನ್ನು ಅವಲಂಬಿಸಿದ ತರ್ಕದ ಮಿತಿಯನ್ನು ಅರಿತುಕೊಂಡರು; ಹಾಗಾಗಿ ಅವರು ಜ್ಞಾನದ ಆಗರಗಳಾಗಿದ್ದ ಶ್ರುತಿ ಅಥವಾ ವೇದಗಳೆಡೆಗೆ ತಮ್ಮ ದೃಷ್ಟಿಯನ್ನು ಸಾರಿಸಿದರು. ವೇದಗಳನ್ನು ಹೊರತು ಪಡಿಸಿ ಸ್ವತಂತ್ರವಾಗಿ ತರ್ಕಿಸುವುದರಿಂದ ನಿಜವಾದ ಜ್ಞಾನವುಂಟಾಗುತ್ತದೆಂಬ ತಮ್ಮ ನಂಬಿಕೆ ಶುಷ್ಕವೆನಿಸತೊಡಗಿದ್ದರಿಂದ ಅವರು ತಮ್ಮ ದೃಷ್ಟಿಯನ್ನು ವೇದಗಳ ಮೇಲೆ ಕೇಂದ್ರೀಕರಿಸಿದರು ಮತ್ತು ಅಲ್ಲಿ ತಮ್ಮ ಪ್ರತಿಪಾದನೆಗಳಿಗೆ  ಹೆಚ್ಚಿನ ವಿವರಣೆ ಮತ್ತು ಅರ್ಥಗಳನ್ನು ಕಂಡುಕೊಂಡರು.
          ಒಂದು ತಿನಿಸಿನ ರುಚಿಯನ್ನು ತಿಳಿಯಬೇಕಾದರೆ ಅದನ್ನು ಸವಿದಲ್ಲದೆ ಅದರ ರುಚಿ ತಿಳಿಯದು. ಹಾಗಾಗಿ ಆ ದಾರ್ಶನಿಕರು ವೇದಗಳಲ್ಲಿ ತಿಳಿಸಲ್ಪಟ್ಟ ಅನುಸರಣ ಯೋಗ್ಯವಾದ ನಿಯಮಗಳನ್ನು ಪಾಲಿಸಿ ಮುಕ್ತಿಯನ್ನು ಅಂದರೆ ತಮ್ಮ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡರು. ಆದರೆ ವೇದಗಳನ್ನು ಆ ದಾರ್ಶನಿಕರು ವಿವಿಧಕೋನಗಳಿಂದ ಅರ್ಥೈಸಿದ್ದರಿಂದ ಹಲವಾರು ಶಾಖೆಗಳು ಉದ್ಭವಿಸಿ ಈಗ ಪ್ರಚಲಿತವಿರುವ ಆರು ದರ್ಶನಗಳಿಗೆ ಎಡೆಮಾಡಿಕೊಟ್ಟಿತು.
ದರ್ಶನಗಳ ಉಗಮ:
          ಹಿಂದೂ ಸಂಪ್ರದಾಯದ ಪ್ರಕಾರ ಈ ಆರು ದರ್ಶನಗಳು: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ – ಇವುಗಳನ್ನು ಪೌರಾಣಿಕ ಋಷಿಗಳು ಪ್ರತಿಪಾದಿಸಿದರು ಎಂದು ತಿಳಿದು ಬರುತ್ತದೆ. ಈ ಋಷಿಗಳ ಹೆಸರುಗಳು ನಮಗೆ ವೇದಗಳಲ್ಲಲ್ಲದೆ ಪುರಾಣೇತಿಹಾಸಗಳಲ್ಲೂ ದೊರಕುತ್ತವೆ ಮತ್ತು ಇವರ ಬೋಧನೆಗಳು ನಮಗೆ ಸೂತ್ರರೂಪದಲ್ಲಿ ದೊರೆಯುತ್ತವೆ. ಸೂತ್ರಗಳು ಬಹಳ ಸರಳ ಮತ್ತು ಸಂಕ್ಷಿಪ್ತವಾಗಿದ್ದು ಅರ್ಥಗರ್ಭಿತವಾಗಿರುತ್ತವೆ. ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಸುಲಭ ಹಾಗಾಗಿ ಅವು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹರಿದುಬಂದಿವೆ. ಆದರೆ ಕಾಲಕ್ರಮೇಣ ಬರವಣಿಗೆ ರೂಢಿಯಾದ ಮೇಲೆ ವಿವಿಧ ದರ್ಶನಗಳ ಶಾಖೆಗಳ ನುರಿತ ಉಪಾಧ್ಯಾಯರುಗಳು ಅವುಗಳಿಗೆ ಭಾಷ್ಯಗಳನ್ನು ಮತ್ತು ಟೀಕೆಗಳನ್ನು ಬರೆದರು. ಆ ಟೀಕೆಗಳಿಗೆ ವೃತ್ತಿಗಳನ್ನು ಮತ್ತು ಈ ವೃತ್ತಿಗಳಿಗೆ ವಾರ್ತಿಕಗಳೆಂಬ ವಿವಿಧ ರೀತಿಯ ಉಪಟಿಪ್ಪಣಿಗಳನ್ನು – ಪದ್ಯ ಹಾಗೂ ಗದ್ಯರೂಪಗಳೆರಡೂ ವಿಧಗಳಲ್ಲಿ ಬರೆದು ದರ್ಶನಗಳ ವಿವಿಧ ಶಾಖೆಗಳ ಮೂಲ ಚಿಂತನೆಗಳನ್ನು ಹೆಚ್ಚು ವಿಸ್ತಾರವಾಗಿ ಪ್ರಚುರ ಪಡಿಸಿದರು. ಬೇರೆ ಶಾಖೆಗಳು ಇವರ ತತ್ವಗಳನ್ನು ಖಂಡಿಸಿದಾಗ ತಮ್ಮ ತಮ್ಮ ಚಿಂತನೆಗಳನ್ನು ಎತ್ತಿಹಿಡಿಯಲು ಪ್ರತಿಯೊಬ್ಬರೂ ಹೆಚ್ಚು ಹೆಚ್ಚಾಗಿ ಹಲವು ರೀತಿಯ ಟಿಪ್ಪಣಿಗಳು ಮತ್ತು ಪ್ರತಿ ಟಿಪ್ಪಣಿಗಳನ್ನು ಬರೆದರು. (ಒಂದೇ ಮಾತಿನಲ್ಲಿ ಹೇಳುವುದಾದರೆ “ಪರಮತ ಖಂಡನ-ಸ್ವಮತ ಮಂಡನ”). ಈ ವಿವಿಧ ರೀತಿಯ ಭಾಷ್ಯಗಳು, ಟೀಕೆಗಳು ಮುಂತಾದವುಗಳಿಂದ ವಿವಿಧ ದರ್ಶನಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯುಂಟಾದ್ದದ್ದಲ್ಲದೆ ಅವು ತತ್ವಶಾಸ್ತ್ರದ ಬಗೆಗಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು.
ಸಾಮಾನ್ಯ ಅಂಶಗಳು:
          ತಾತ್ವಿಕವಾಗಿ ವಿವಿಧ ದರ್ಶನಗಳಲ್ಲಿ ತೀಕ್ಷ್ಣವಾದ ವ್ಯತ್ಯಾಸಗಳು ಕಂಡುಬಂದರೂ ಆರೂ ದರ್ಶನಗಳ ಪ್ರಾಯೋಗಿಕ ನಿಯಮಗಳಲ್ಲಿ ಎದ್ದು ಕಾಣುವಂತಹ ಸಾಮರಸ್ಯವಿದೆ.
          ಮಾನವನ ದುಃಖ ಮತ್ತು ಯಾತನೆಯನ್ನು ಪ್ರಾರಂಭದಲ್ಲಿ ಎಲ್ಲಾ ದರ್ಶನಗಳೂ ಗುರುತಿಸಿದವು ಮತ್ತು ಎಲ್ಲಾ ವಿಧವಾದ ದುಃಖದಿಂದ ಸಂಪೂರ್ಣ ಮುಕ್ತಿಯನ್ನು ಅಂತಿಮವಾಗಿ ಹೊಂದುವುದು ಅವೆಲ್ಲುವುಗಳ ಸಾಮಾನ್ಯ ಗುರಿಯಾಗಿತ್ತು.
          ಈ ಅಂತಿಮ ಗುರಿಯನ್ನು ಮುಟ್ಟಲು ಸರಿಯಾದ ಜ್ಞಾನದಿಂದ ಮಾತ್ರ ಸಾಧ್ಯವಿದೆ. ಸರಿಯಾದ ಜ್ಞಾನವೆನ್ನುವುದು ಬೌದ್ಧಿಕ ಮಟ್ಟದ್ದಲ್ಲ ಆದರೆ ಬುದ್ಧಿ-ಮನಸ್ಸುಗಳ ಸಂಕೀರ್ಣಕ್ಕೆ ಅತೀತವಾದ ಆತ್ಮದ ಅರಿವನ್ನು ನೈಜ ಮತ್ತು ಪ್ರತ್ಯಕ್ಷ ಅನುಭವದಿಂದ ಪಡೆಯುವಂತಾಹದ್ದಾಗಿದೆ ಎಂದು ಎಲ್ಲಾ ದರ್ಶನಗಳು ಅಭಿಪ್ರಾಯಪಟ್ಟವು.
          ಆತ್ಮದ ನಿಜವಾದ ಜ್ಞಾನವನ್ನು ಅರಿಯಲಿಕ್ಕೆ ಕಠಿಣವಾದ ನೀತಿಯುಕ್ತ ಜೀವನವನ್ನು ಪಾಲಿಸುವುದು ಮತ್ತು ಕಾಮ-ಕ್ರೋಧಾದಿ ಅರಿಷಡ್ವರ್ಗಗಳನ್ನು ಗೆಲ್ಲುವುದು ಅನಿವಾರ್ಯ. ಹಾಗೆಯೇ ಈ ರೀತಿಯ ಸಾಧನೆಯ ಮೂಲಕ ಅರಿತುಕೊಂಡ ಸತ್ಯಗಳ ಬಗ್ಗೆ ನಿರಂತರ ಅಧ್ಯಯನ ಮತ್ತು ಮನನ ಕೂಡ ಆತ್ಮದ ನೈಜ ಸ್ವರೂಪವನ್ನು ತಿಳಿದುಕೊಳ್ಳುವವರೆಗೆ ಬಹು ಅವಶ್ಯಕ ಎಂದು ಅವು ಸಾರಿದವು.
          ಎಲ್ಲ ದರ್ಶನಗಳೂ ಕೂಡ ಕರ್ಮ ಸಿದ್ಧಾಂತವನ್ನು ನಂಬುತ್ತವೆ ಮತ್ತು ಈ ಪ್ರಪಂಚ ನಮಗೆ ನೀತಿಯುಕ್ತ ಜೀವನವನ್ನು ಸಾಗಿಸಲು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಹೊಂದಲು ಭೂಮಿಕೆಯನ್ನು ಒದಗಿಸಿ ಕೊಡುತ್ತದೆ ಎನ್ನುವುದನ್ನೂ ನಂಬುತ್ತವೆ.

ಈ ದರ್ಶನಗಳಲ್ಲಿ ನಮ್ಮ ಅರಿವು ಸರಳ ಸತ್ಯಗಳಿಂದ ಉನ್ನತ ಸತ್ಯಗಳೆಡೆಗೆ ಹಂತ ಹಂತವಾಗಿ ಸಾಗಿ; ಬಾದರಾಯಣ ಪ್ರತಿಪಾದಿಸಿದ ಅತ್ಯುನ್ನತವಾದ ವೇದಾಂತ ದರ್ಶನದಲ್ಲಿ ಅಂತಿಮವಾಗಿ ಪರ್ಯಾವಸಾನಗೊಳ್ಳುವುದನ್ನು ಕಾಣುತ್ತೇವೆ. ವೇದಾಂತ ತತ್ವವು ಜಗತ್ತಿನ ಎಲ್ಲಾ ತತ್ವಗಳಿಗಿಂತ ಅತೀ ಎತ್ತರದ ಸ್ಥಾನದಲ್ಲಿದ್ದು ನಾವು ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡುತ್ತದೆ.

Leave a Reply